Thursday, December 22, 2016

ಗುನಗ

 ಅವನದು ಒಂಥರಾ ಸರಳ ವ್ಯಕ್ತಿತ್ವ . ಆವಾಗ ಅವನ ವಯಸ್ಸುಸುಮಾರು ಹತ್ತಿರ ಹತ್ತಿರ ೪೦ ಇರಬಹುದೇನೋ.  ಮೊದಲ ಸಲ ನೋಡಿದಾಗಲೇ ತುಂಬಾ ಪ್ರಾಮಾಣಿಕನಂತೆ ಕಂಡ. ಅವನೊಂದಿಗಿನ ಒಡನಾಟ  ಸುಮಾರು ೪ ವರ್ಷಗಳು. ಈ ನಾಲ್ಕು ವರ್ಷಗಳಲ್ಲಿ ಬಹಿತೇಕವಾಗಿ ಪ್ರತಿದಿನ ಅವನನ್ನು ನೋಡುತ್ತಿದ್ದೆ  ಮಾತನಾಡುತ್ತಿದ್ದೆ. ಅವನ ಬಗ್ಗೆ ತುಂಬಾ ಗೊತ್ತಿಲ್ಲದಿದ್ದರೂ ಅಲ್ಪ ಸ್ವಲ್ಪ ತಿಳಿದುಕೊಂಡಿದ್ದೇನೆ ಅಂತ ಅಂದುಕೊಂಡಿದ್ದೇನೆ. ಯಾಕೋ ಅವನ್ ಬಗ್ಗೆ ಬರೆಯಬೇಕು ಅಂತ ಬಹಳ ಸಲ ಈ ಮೊದಲೇ ಅನಿಸಿದ್ದುಂಟು . ಆದರೆ ಕಾರಣಾಂತರಗಳಿಂದ ಅಥವಾ ನನ್ನ ಆಲಸಿತನದಿಂದ ( ಬಹುಶ  ಇದೇ ಸರಿ.. ) ಬರೆಯಲು ಆಗಲಿಲ್ಲ . ಅವನೇನು  ದೊಡ್ಡ ಉದ್ಯೋಗಪತಿಯೋ , ಅಥವಾ  ಸಮಾಜ ಸೇವಕನೋ ಅಥವಾ ಅಂಥದ್ದೊಂದು  ಮುಖವಾಡ ಹಾಕಿಕೊಂಡು ರಾಜಕೀಯದಲ್ಲಿ ತನ್ನ ಭವಿಷ್ಯ ರೂಪಿಸ ಹೊರಟಿರುವ ದೂ(ದು)ರ ದೃಷ್ಟಿಯುಳ್ಳ ಮಹಾನುಭಾವನೋ, ಅಥವಾ ದುಡ್ಡಿರುವ ದೊಡ್ಡ ಕುಳವೊ ... ಯಾವುದೂ ಅಲ್ಲ. ಆದರೂ   ಯಾಕೆ ಅವನ ಬಗ್ಗೆ ಬರೆಯಬೇಕು ? ಎಂಬ ಪ್ರಶ್ನೆಗೆ  ಇದ್ಯಾವುದೂ ನನ್ನ ಉತ್ತರವಲ್ಲ. ಅಥವಾ ಒಂದು  ವ್ಯಕ್ತಿಯ ಬಗೆಗೆ ಬರೆಯಬೇಕಾದರೆ  ಅವನು ಈ ಮೇಲಿನವರಲ್ಲಿ ಒಬ್ಬನಾಗಿರಬೇಕಾಗಿಯೂ  ಇಲ್ಲ.  ನಾನು ಅವನ ಬಗ್ಗೆ ಬರೆಯುತ್ತಿರುವುದಕ್ಕೆ ಕಾರಣ ನನಗೆ ಅವನೊಬ್ಬ ಮಾನವೀಯತೆಯಿರುವ, ಸಹಜ ಸರಳ ಮನುಷ್ಯನಂತೆ ಕಂಡ.
                                        'ಗುನಗ' ನಮ್ಮ ಹಳೆಯ ಮನೆಯ ಎದುರಿಗೆ ಒಂದು ದಿನಸಿ ಅಂಗಡಿ ಇಟ್ಟುಕೊಂಡಿದ್ದ. ನೋಡಲು ಸ್ವಲ್ಪ ಕುಳ್ಳಗೆ, ಸ್ವಲ್ಪ ದಪ್ಪಗೆ ಇದ್ದ . ಮುಂದಲೆ ಕೂದಲು ಉದುರಿ ಹಣೆ ಆಗಲೇ ಸರಿ ಸುಮಾರು ನೆತ್ತಿಯವೆರೆಗೆ ತನ್ನ ಇರುವನ್ನು ತೋರಿಸುತ್ತಿತ್ತು. ಮುಖದಲ್ಲಿಯ ಸೌಮ್ಯತೆ ಅವನ ವಕ್ತಿತ್ವಕ್ಕೆ  'ತಾನಾಯಿತು ತನ್ನ ಕೆಲಸವಾಯಿತು' ಎಂದು ಮುನ್ನುಡಿ ಬರೆದಂತಿತ್ತು. ಇವನು ಯಾರ ತಂಟೆಗೂ ಹೋಗದವನೂ ಹಾಗೂ ಒಳ್ಳಯವನೂ ಎಂದು ಸರ್ವೇ ಸಾಮಾನ್ಯನೂ ಮತ್ತು  'ಇವನಿಗೆ ಸುಲಭವಾಗಿ  ಟೋಪಿ ಹಾಕಬಹುದೆಂದು' ಆ ವಿಷಯದಲ್ಲಿ ನುರಿತ ಹಾಗೂ 'ಬಕ್ರ' ಹುಡುಕುತ್ತಿರುವವರೂ ಸುಲಭವಾಗಿ ಅರ್ಥೈಸಿಕೊಂಡುಬಿಡುತ್ತಿದ್ದರು.ಒಟ್ಟಿನಲ್ಲಿ ಅಷ್ಟು ಪಾರದರ್ಶಕ ವ್ಯಕ್ತಿತ್ವ ಅಂತ ಹೇಳಬವುದೇನೋ.
                                             'ಗುನಗ' ಅವನ ನಿಜವಾದ ಹೆಸರಲ್ಲ. ಅದು ಅವನಿಗೆ ನಾನಿಟ್ಟ ಹೆಸರು. ಹಾಗಂತ ಇದು ನನಗೆ ಹಾಗೂ ನಮ್ಮ ಮನೆಗೆ ಬರುವ ನನ್ನ ಹತ್ತಿರದವರಿಗೆ ಬಿಟ್ಟು ಯಾರಿಗೂ ಗೊತ್ತಿಲ್ಲ, ಅವನಿಗೂ ಗೊತ್ತಿಲ್ಲ !. ನಾವು ನಮ್ಮ ಅನುಕೂಲಕ್ಕೆ ಅವನ್ನನ್ನು ಕರೆಯುವ ಹೆಸರು. ಅವನ ನಿಜವಾದ ಹೆಸರು 'ಸತೀಶ'. ಅದು ಏನೇ ಇರಲಿ, ನಾನು ಈ ಲೇಖನದುದ್ದಕ್ಕೂ ಅವನನ್ನು 'ಗುನಗ' ಎಂದೇ ಕರೆಯುತ್ತೇನೆ. ಅವನಿಗೆ ನಾನು ಈ ಹೊಸ ನಾಮಕರಣ ಮಾಡಿದ್ದಕ್ಕೆ ಒಂದು ಕಾರಣವಿದೆ.  ಅವನು ಸ್ವಲ್ಪ ಗಡಿಬಿಡಿಯಿಂದ ಹಾಗು ಸ್ವಲ್ಪ ಸಣ್ಣ ಸ್ವರದಲ್ಲಿಯೂ  ಮಾತನಾಡುತ್ತಾನೆ  ಆದ್ದರಿಂದ ಕೇಳುವವರಿಗೆ ಸ್ವಲ್ಪ ಅಸ್ಪಷ್ಟವಾಗಿಯೂ ಹಾಗೂ ಅವನು ಏನೋ 'ಗುನುಗಿ' (ಗೊಣಗಿ) ದಂತೆಯೂ ಅನ್ನಿಸುವುದುಂಟು . ಅದಕ್ಕಾಗಿಯೇಈ ಹೊಸ ಹೆಸರು!. .. ಅನ್ವರ್ಥಕ ನಾಮ!! . ಬಹುತೇಕವಾಗಿ ಅವನು ಹೇಳಿದ್ದು  ಅರ್ಥವಾಗುವುದು  "ಆಂ?"  ಅಥವಾ "ಏನಂದ್ರಿ" ? ಎಂದು  ನೀವು ಅವನನ್ನು ಪುನಃ ಕೇಳಿದ ಮೇಲೆಯೇ.
                                               ಅವನ ಅಂಗಡಿಯ ಹತ್ತಿರವೇ ಮನೆ  ಬಾಡಿಗೆಗೆ ತೆಗುದುಕೊಂಡುದರಿಂದ , ದಿನನಿತ್ಯ ಬೇಕಾಗುವ ಸಾಮಗ್ರಿಗಳಿಗೆ ಅವನ ಅಂಗಡಿಗೆ ಹೋಗುತ್ತಿದ್ದೆ. ಆ  ಲೊಕ್ಯಾಲಿಟಿ  ಬಗ್ಗೆ, ಹತ್ತಿರದ ಗ್ಯಾಸ್ ಏಜನ್ಸಿ ಬಗ್ಗೆ,  ಹಾಗೂ ಇನ್ನಿತರ ವಿಷಯಗಳ ಬಗ್ಗೆ ನನಗೆ ಮಾಹಿತಿ ಕೊಟ್ಟವನು ಅವನೇ. ಹೀಗೆ ದಿನಗಳೆದಂತೆ, ಬೆಳಿಗ್ಗೆ ಎದ್ದು ಹಾಲು ತರುವುದರಿಂದ ಹಿಡಿದು ರಾತ್ರಿ ಊಟಕ್ಕೆ ಕುಳಿತ ಮೇಲೆ ಮೊಸರು ಖಾಲಿಯಾಗಿದೆಯೆಂದು ಅರಿವಾದಾಗ ಅರ್ಧದಲ್ಲಿ ಕೈ ತೊಳೆದು ಮೊಸರು ತರಲಿಕ್ಕೆ ಓಡುತ್ತಿದ್ದುದು ಕೂಡ ಗುನುಗನ ಅಂಗಡಿಗೇ. ಹೀಗೆ ದಿನಕ್ಕೆ ಎರಡು ಬಾರಿಯಾದರೂ ಅವನಂಗಡಿಗೆ ಹೋಗುಬರುತ್ತಿದ್ದೆ. ಮನೆಯಲ್ಲಿ ಒಬ್ಬನೇ ಇದ್ದು ಬೋರಾದಾಗ ಅವನ ಅಂಗಡಿಗೆ ಹೋಗಿ ಅವನ ಜೊತೆ ಹರಟುತ್ತಿದ್ದುದುಂಟು.   ಇತ್ತೀಚಿನ ರಾಜಕೀಯದಿಂದ ಹಿಡಿದು ರೈತರ ಗೋಳು, ಬೆಂಗಳೂರಿನ ರಿಯಲ್ ಎಸ್ಟೇಟ್ ಬಗ್ಗೆ ಎಲ್ಲಾ ಮಾತನಾಡುತ್ತಿದ್ದ . ರಾಜಕೀಯ ಪುಡಾರಿಗಳು ದೇಶ ದೋಚುತ್ತಿರುವ ಬಗ್ಗೆ ಬೇಸರಗೊಳ್ಳುತ್ತಿದ್ದ, ಮಳೆ ಆಗದಿರುವ ಬಗ್ಗೆ ಅದರಿಂದ ಆಗುವ ರೈತರ ಸಮಸ್ಯೆಗಳ  ಬಗ್ಗೆ ತನ್ನ ಕಾಳಜಿ  ವ್ಯಕ್ತಪಡಿಸುತ್ತಿದ್ದ .  "ಈ ದೇಶ ಉದ್ಧಾರ ಆಗುವುದು ತುಂಬಾ ಕಷ್ಟ ಸಾರ್ " ಎಂದು ಆಗಾಗ ಹೇಳುತ್ತಿದ್ದ. ಇವುಗಳ ಬಗ್ಗೆ ಅವನಿಗಿದ್ದ ನಿಜವಾದ ಕಾಳಜಿ ನನಗೆ ಅವನಂ ಮೇಲಿನ ಗೌರವ ಜಾಸ್ತಿ ಮಾಡಿತು.
                                            ಪ್ರತಿಸಲ ಹೋದಾಗಲೂ "ತಿಂಡಿ ಆಯ್ತಾ ಸಾರ್?" ಅಥವಾ "ಕಾಫೀ ಆಯ್ತಾ ಸಾರ್?" ಎಂದು ಮಾತಿಗೂ ಶುರುವಿಟ್ಟುಕೊಳ್ಳುತ್ತಿದ್ದ . "ಅಪ್ಪ ಅಮ್ಮ ಚೆನ್ನಾಗಿದಾರ?",  "ಯಾವಾಗ ಬರ್ತಾರೆ ?" "ಕೆಲಸ ಹೇಗೆ ನಡೀತಿದೆ ಸಾರ್?"  ಎಂದು ನನ್ನ ಬಗ್ಗೆಯೂ ವಿಚಾರಿಸುತ್ತಿದ್ದ. ಅಂಗಡಿಯಲ್ಲಿ ನಾವಿಬ್ಬರೇ ಇರುವಾಗ ಕೊಂಚ ತನ್ನ ಬಗ್ಗೆಯೂ ಹೇಳಿಕೊಳ್ಳುತ್ತಿದ್ದ.  ಅವನ ವೈಯಕ್ತಿಕ ವಿಷಯಗಳನ್ನು ನನೊಂದಿಗೆ ಹಂಚಿಕೊಳ್ಳಲು  ಅವನು  ಕಂಫರ್ಟ್  ಫೀಲ್ ಆಗುತ್ತಿದ್ದ ಅಂತ ನನಗನ್ನಿಸುತ್ತೆ . ಅವನು ನನ್ನಲ್ಲಿ ಹಂಚಿಕೊಂಡಿದ್ದನ್ನು ನನಗರ್ಥವಾದಂತೆ ಬರೆಯಯುವ ಪ್ರಯತ್ನ ಮಾಡುತ್ತೇನೆ . ಅವನು ಊರು 'ಕಡೂರು'. ಊರಿನಲ್ಲಿ ಹೊಲ ಇದೆ . ಜೋಳ ಬೆಳೆಯುತ್ತಾರಂತೆ. ಊರಿನಲ್ಲಿ ಅಣ್ಣ ಹೊಲ ನೋಡಿಕೊಂಡು ಹೋಗುತ್ತಿದ್ದಾನೆ. ಅಣ್ಣನಿಗೆ ಮದುವೆ ಆಗಿದೆ. ಅಪ್ಪ ಅಮ್ಮನ ಬಗ್ಗೆ ಪ್ರಸ್ತಾಪಿಸಿದ ನೆನಪು ಕಾಣುತ್ತಿಲ್ಲ.
ಹೊಲದಿಂದ ಬರುವ ಆದಾಯ ಸಾಲದು ಎಂದು  ಇವನು ದುಡಿಮೆ ಮಾಡಲು ಬೆಂಗಳೂರಿಗೆ ಬಂದು ಆಗಲೇ ೧೦ ವರ್ಷಗಳು ಕಳೆದುಹೋಗಿದ್ದವು. ಮೊದಲಿನ ೧೦ ವರ್ಷದಿಂದ ಅಂಗಡಿ ಮಾಡಿಕೊಂದು ಬಂದಿದ್ದರೂ ಆರ್ಥಿಕವಾಗಿ ಅಷ್ಟೊಂದು ಅಭಿವೃದ್ಧಿ ಆದಂತೆ ಇರಲಿಲ್ಲ.  ೧೦ ವರ್ಷಗಳಿಂದಲೂ  ಅಂಗಡಿನೇ  ಮಾಡಿಕೊಂಡಿದ್ದನೋ ಅಥವಾ ಬೇರೆ ಏನಾದ್ರೂ ಕೆಲಸ ಮಾಡಿಕೊಂಡಿದ್ದನೋ ಗೊತ್ತಿಲ್ಲ . ಈ ಎಲ್ಲ ಪ್ರಶ್ನೆಗಳು ನನಗೆ ಸಹಜವಾಗಿ ಬಂದಿದ್ದರೂ ಕೇಳುವ ಗೊಡವೆಗೆ ಹೋಗಲಿಲ್ಲ. ನನ್ನ ಸ್ವಭಾವವೇ ಹಾಗೆ ಏನನ್ನೂ ಯಾರಿಂದಲೂ ಕೆದಕುವವನಲ್ಲ ಮತ್ತೂ  ಈ ತರಹದ ಪ್ರಶ್ನೆಗಳನ್ನು ಕೇಳುವುದು ತರವಲ್ಲ ಎಂದು ಆ ಹೊತ್ತಿಗೆ ಅನಿಸಿದ್ದರಿಂದ ಕೇಳಲಿಲ್ಲ. ಅಂದಹಾಗೆ ಅವನು ಗಿರಾಕಿಗಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ , ಚೆನ್ನಾಗಿಯೇ ಮಾತನಾಡುತ್ತಿದ್ದ . ನನಗನ್ನಿಸಿದ ಪ್ರಕಾರ  ವ್ಯಾಪಾರವೂ ಚೆನ್ನಾಗಿಯೇ ನಡೆಯುತ್ತಿತ್ತು . ಆದರೂ ಯಾಕೊ.. ಗುನುಗ ಆರ್ಥಿಕವಾಗಿ ಬೆಳೆದಂತೆ ಕಾಣಿಸುತ್ತಿರಲಿಲ್ಲ .  ಒಂದು ದಿನ ,ಅಲ್ಲಿ ನಾನು ಮತ್ತು ಅವನು ಇಬ್ಬರೇ ಇದ್ವಿ, " ಸಾರ್ ನಮ್ಮವ್ರೆ ನಮಗೆ ಮೋಸ ಮಾಡ್ತಾರೆ ಸಾರ್ " ಎಂದು ಹೇಳಿದ . ಧ್ವನಿಯಲ್ಲಿ ನೋವಿತ್ತು, ಆರ್ದ್ರತೆ ಇತ್ತು. ಅವನ ಮುಖ ನೋಡಿದೆ , ತುಂಬಾ ನೊಂದಿದ್ದಂತೆ ಕಂಡಿತು . "ಯಾಕ್ರೀ ಏನಾಯ್ತು ? " ಎಂದೆ .   "ದುಡಿದಿದ್ದು ಎಲ್ಲ ಮನೆಗೆ ಕಳಿಸ್ತಾ ಇದ್ದೆ ಸಾರ್ ಆದರೆ....... ಯಾರನ್ನು ನಂಬೋದು ಯಾರನ್ನು ಬಿಡೋದೋ ತಿಳಿತಾ ಇಲ್ಲ ಸಾರ್, ಏನ್ಮಾಡೋದು ಸಾರ್  ನಮ ಟೈಮೇ  ಚನ್ನಗಿಲ್ಲಾ ಸಾರ್ " ಅಂದು ಅಲವತ್ತುಕೊಂಡ .      ನನಗೆ ಏನು ಹೇಳಬೇಕೆಂದು ತೋಚಲಿಲ್ಲ ..ಸುಮ್ನೆ ಹುಬ್ಬೇರಿಸಿ ಪ್ರಶ್ನಾರ್ಥಕ ವಾಗಿ ನೋಡಿದೆ... . ಗುನಗ  ಮುಂದುವರೆಸಿದ " ಸಾರ್ ನಮ್ಮಣ್ಣ  ಹೊಲಕ್ಕೆ ಹೋಗಕ್ಕೆ, ಬರಕ್ಕೆ ಎಲ್ಲ ಉಪಯೋಗ ಆಗುತ್ತೆ ಅಂತ ಸಾಲ ಮಾಡಿ ಹೊಸ ಬೈಕ್ ತೊಗೊಂಡ ಸರ್.... ಸಾಲ ಕಟ್ಟೋಕ್ಕೆ ನನ್ನತ್ರ ದುಡ್ಡು ಇಸ್ಕೊತಾ ಇದ್ದ . 'ಈಗ  ನನ್ನತ್ರ ಇಲ್ಲ ನೀನು ವಸಿ ಕೊಡು ಆಮೇಲೆ ನಿಂಗೆ ಕೊಡ್ತೀನಿ ' ಎಂದು ಬೇಕಾದಾಗೆಲ್ಲ ಅದೂ ಇದೂ ಕಾರಣ ಹೇಳಿ ದುಡ್ಡು ಇಸ್ಕೊಂಡ . ಈವಾಗ ಕೊಡಲ್ಲ ಅಂತ ಕೂತ್ಕೊಂಡವ್ನೆ. ನಮ್ಮಣ್ಣ ಚೆನ್ನಾಗೇ ಇದ್ದ ಸರ್ ... ಮದ್ವೆ ಆದ್ಮೇಲೆ ಹೀಂಗೆಲ್ಲ ಆಡ್ತವ್ನೆ . ನಮ್ಮ ಅತ್ಗೆನೇ ಇವಕ್ಕೆಲ್ಲ ಕಾರಣ್ ಸಾರ್ .  ಅದೇನ್ ಮಾಡಿದ್ಲೋ  ಏನೋ..ಈವಾಗ ನಮ್ಮತ್ರ ಸರಿಯಾಗಿ ಮಾತು ಕೂಡ ಅಡ ಲ್ಲ ಅವ್ನು.  ನನಗೆ ಬೇರೆ ಇನ್ನೂ ಮಾಡುವೆ ಆಗಿಲ್ಲ. ನಾನು ಕಷ್ಟ ಪಟ್ಟು ಸಂಪಾದನೆ  ಮಾಡಿರೋ ದುಡ್ಡನ್ನೂ  ಕಳ್ಕೊಂಡೆ ಸಾರ್. ಈ  ಪರಿಸ್ಥಿತಿಯಲ್ಲಿ ಯಾರು ನನಗೆ ಹೆಣ್ಣು ಕೊಡ್ತಾರೆ ಸಾರ್ ?"  ಗುನುಗ ಇನ್ನೂ ಏನೇನೋ ಹೇಳುತ್ತಲೇ ಇದ್ದ.. ನನಗೆಏನು ಹೇಳಬೇಕೋ ಅರ್ಥವಾಗಲಿಲ್ಲ..."ಏನ್ ಮಾಡೋದು ... ಬೇಜಾರು ಮಾಡ್ಕೋಬೇಡಿ ಸತೀಶ ಅವ್ರೆ" ಎಂದೆ . ಇನ್ನೇನು ಹೇಳಲೂ ನನ್ನಿಂದ ಸಾಧ್ಯವಾಗದೆ ಹೋಯಿತು .. ಅವನ ಕಥೆ ಕೇಳಿ ನನಗೂ ತುಂಬಾನೇ ಬಜಾರು ಆಯಿತು . ದುಡ್ದು  ಹಾಗೂ  ರಕ್ತ ಸಂಭಂಧಗಳ  ನಡುವಿನ ಶಕ್ತಿ ಪ್ರದರ್ಶನ ಪಂದ್ಯದಂತೆ ಕಂಡಿತು ನನಗೆ ಅವನ ಕಥೆ.  ' ಹೌದು ..ಇಂತಹ ದುಡ್ಡು vs ಸಂಬಂಧ,  ದುಡ್ಡು vs ಮಾನವೀಯತೆ  ದುಡ್ಡುವ vs ದುಡ್ಡು ಗಳಂಥ  ನೂರಾರು ಕಥೆಗಳನ್ನು ನಮ್ಮ ಜೀವನದಲ್ಲಿ ಕೇಳಿದ್ದೆವಲ್ಲವೇ?  ಎಂದಿನಂತೆ ಗುನುಗನ  ಕಥೆಯಲ್ಲೂ ದುಡ್ಡೇ ಗೆಲ್ಲಬಹುದೇ ಅಥವಾ ಸಿನಿಮಾಗಳಲ್ಲಿ  ಆಗುವಂತೆ ಕೊನೆಯಲ್ಲಿ ದುಡ್ಡಿಗಿಂತ ಮಾನವೀಯತೆ  ಮಿಗಿಲು ಅಂತ ಸಾಬೀತಾಗಿ ನಿಟ್ಟುಸಿರು ಬಿಡುವಂತಾಗಬಹುದೇ ?   ಈ ದುಡ್ಡಿಗೆ  ಎಲ್ಲರನ್ನೂ  ಎದುರು ಹಾಕಿಕೊಳ್ಳುವಷ್ಟು  ಶಕ್ತಿಯೇ ? ಪೊಗರೇ ? ಇಷ್ಟು ಶಕ್ತಿ ಇದಕ್ಕೆ ಎಲ್ಲಿಂದ ಬಂತು ? ಹೇಗೆ ಬಂತು? ಮನುಷ್ಯನೇ ಕೊಟ್ಟನೆ ? ಕೊಟ್ಟು ಕೆಟ್ಟನೆ  ? ಹೀಗೆ ನೂರಾರು ಪ್ರಶ್ನೆಗಳು ಆ ದಿನವೆಲ್ಲ ನನ್ನನ್ನು ಕುಟುಕುತ್ತಿದ್ದವು. ಮನಸ್ಸಿಗೆ ತುಂಬಾ ಬೇಜಾರಾಗಿತ್ತು
                             ದಿನಗಳು ಎಂದಿನಂತೆ  ಸಾಗುತ್ತಿದ್ದವು , ಈ ಮಧ್ಯೆ ಅಂಗಡಿ ಮುಚ್ಚಿ  ಗುನುಗ ಪದೇ ಪದೇ ಊರಿಗೆ ಹೋಗುತ್ತಿದ್ದ. ಯಾವತ್ತಿನಂತೆ ನನ್ನ ಹತ್ತಿರ ಮಾತನಾಡುತ್ತಿದ್ದ .  ಇಲೆಕ್ಟ್ರಾನಿಕ್ಸ್ ಸಿಟಿ  ಯಲ್ಲಿ ಸೈಟ್ ತೆಗೆದುಕೊಂಡಿರುವ ವಿಷಯ ಹೇಳಿದ. ತಗೆದುಕೊಂಡು ೬ ವರ್ಷಗಳಾಗಿವೆಯಂತೆ. ಈಗ ಅದನ್ನು ಮಾರಬೇಕೆಂದುಕೊಂಡಿದ್ದಾಗಿ ತಿಳಿಸಿದ . ಪರವಾಗಿಲ್ವೇ  ಗುನುಗ ೬ ವರ್ಷಗಳ ಹಿಂದೆಯೇ ಯೋಚಿಸಿ ಸೈಟ್ ಖರೀದಿಸಿರುವ ಬಗ್ಗೆ ಆಶ್ಚರ್ಯ ಆಯಿತು . ಆದರೆ ೬ ವರ್ಷಗಳು ಕಳೆದರೂ ಅದಕ್ಕೆ ಸಾಕಷ್ಟು ಬೆಲೆ ಬರಲಿಲ್ಲವೆಂದೂ,  ಈಗ ಅದನ್ನು ಮಾರಲು ಸ್ವಲ್ಪ ಕಾಗದ ಪತ್ರ ದ  ತೊಂದರೆ  ಇರುವುದಾಗಿಯೂ ತಿಳಿಸಿದ. ಪಾಪ ಎಷ್ಟೊಂದು ತೊಂದರೆಗಳು .. ಅವನು ಪ್ಲಾನ್ ಸರಿಯಾಗಿಯೇ ಮಾಡಿದ್ದ , ಆದರೂ ಬೆಲೆ ಬರಲಿಲ್ಲ , ಬಿಲ್ಡರಗಳು ಕಾಗದ ಪತ್ರ ದಲ್ಲಿಯೂ ಏನಾದ್ರೂ ಯಾಮಾರಿಸಿರಬಹುದೇ ? ಎಂದು ಯೋಚಿಸುತ್ತಿರುವಾಗಲೇ  " ಸಾರ್ ಮುಂದಿನ ವಾರ ನನ್ನ ಮದ್ವೆ  ಸಾರ್ ... ನಮ್ಮೂರಿನ  ಹತ್ತಿರದವಳೇ ಕನ್ಯಾ ಸಾರ್, ಕಡೂರಿನಲ್ಲೇ ಮದ್ವೆ ... ಮತ್ತೆ   ನೀವು ಬರ್ಬೇಕು ಮದ್ವೆಗೆ "  ಎಂದು ಆಮಂತ್ರಣ  ಪತ್ರಿಕೆ ಕೈಗಿತ್ತ.   ಕಂಗ್ರಾಜುಲೇಷನ್ಸ್  ಹೇಳಿ ಮನೆ ದಾರಿ ಹಿಡಿದೆ . ಆಗಷ್ಟು ದಿನ ಅಕ್ಕ ಪಕ್ಕದ ಅಂಗಡಿಯವರು ಅವನನ್ನು ಗೋಳು ಹೊಯ್ಕೋತ ಇದ್ರು , ತಮಾಷೆ ಮಾಡ್ತಾ ಇದ್ರು. ನಾನು  ಅವನ ಮದ್ವೆಗೆ ಹೋಗಲಿಲ್ಲ . ಅಥವಾ ಹೋಗುವ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎಂದು ಹೇಳಬಹುದು .  
                           ಮದುವೆ ನಂತರದ ದಿನಗಳಲ್ಲಿ  ಗುನಗ ಮೊದಲಿನಂತೆ ತುಂಬಾ ಹೊತ್ತು ಅಂಗಡಿಯಲ್ಲಿ  ಕುಳಿತಿರುತ್ತಿರಲಿಲ್ಲ . ಟೈಂ  ಟು ಟೈಮ್ ಬರುತ್ತಿದ್ದ ಹೋಗುತ್ತಿದ್ದ . ಸುಮಾರು ೯-೧೦ ತಿಂಗಳಗಳ  ನಂತರ ಮಗ ಹುಟ್ಟಿರುವ ವಿಷಯವನ್ನೂ  ತಿಳಿಸಿದ್ದ . ತುಂಬಾ ಖುಷಿಯಾಗಿದ್ದ , ಊರಿಗೆ ಹೋದರೆ ನಾಲ್ಕಾರು ದಿನ ಉಳಿದು ಬರುತ್ತಿದ್ದ . ಮಕ್ಕಳ ಜೊತೆಗೆ ಕಾಲ ಕಳೆಯುವ ಸುಖದ ಬಗ್ಗೆ ಮಾತಾಡುತ್ತಿದ್ದ . "ದುಡಿಯೋದು ಯಾವಾಗ್ಲೂ ಇದ್ದಿದ್ದೇ ಸಾರ್  ದುಡಿದು ಏನು ಮಾಡೋದು?" ಎನ್ನುತ್ತಿದ್ದ . ಮಗನ ಜೊತೆ ಆತ ಆಡಲು ತುಂಬಾ ಇಷ್ಟಪಡುತ್ತಿದ್ದ ... ನಿಜವಾಗ್ಲೂ  ತುಂಬಾ ಅರಿತುಕೊಂಡವನಂತೆ ಕಂಡ ... ದುಡ್ಡು vs ಸಂಬಂಧ ಮ್ಯಾಚ್ ನಲ್ಲಿ ದುಡ್ಡನ್ನು ಸೋಲಿಸಿ ಹೊಸಕಿ ಹಾಕಿದ ಚಾಂಪಿಯನ್ ನಂತೆ ಕಾಣತೊಡಗಿದ್ದ.
                                  ಕೆಲವು ದಿನಗಳ  ನಂತರ ನಾನೂ  ಮನೆ ಬದಲಾಯಿಸಿದೆ, ಆದ್ರೆ ಏರಿಯಾ ದಲ್ಲೇ ಇದ್ರೂ ಅವನ ಅಂಗಡಿಗೆ  ಮೊದಲಿನಷ್ಟು ಹತ್ರ ಇರಲಿಲ್ಲ, ಅದಕ್ಕೇ ಪದೇ ಪದೇ ಹೋಗುತ್ತಿರಲಿಲ್ಲ. ಒಂದೆರಡು ತಿಂಗಳುಗಳ ನಂತರ ಅವನು ಅಂಗಡಿ ಮುಚ್ಚಿರುವುದಾಗಿ ತಿಳಿದು ಬಂತು. ಎಲ್ಲಿಗೆ ಹೋಗಿರಬಹುದು ? ಬೆಂಗಳೂರಿನ ಸಹವಾಸ ಸಾಕೆಂದು ಊರಿಗೆ ಹೋಗಿರಬಹುದೇ ?  ಅಥವಾ ಬೇರೆ ಊರಿಗೆ ಹೋಗಿರಬಹುದೇ ? ಫೋನ್ ಮಾಡಿ ಕೇಳೋಣವೆಂದರೆ  ಅವನ ನಂಬರ್ ನನ್ನ ಹತ್ರ ಇಲ್ಲ.  ಛೇ .. ಇಷ್ಟು ಒಡನಾಟ ಇದ್ರೂ ಅವನ ಫೋನ್ ನಂಬರ್ ಕೂಡ ತೆಗೆದುಕೊಳ್ಳ ಲಿಲ್ವಲ್ಲ  ಎಂದು ನನ್ನ ಮೇಲೆ ನನಗೆ ಬೇಜಾರರಾಗುತ್ತಿದೆ .
ಒಟ್ಟಿನಲ್ಲಿ  ಗುನಗ ಒಳ್ಳೆ ಮನುಷ್ಯ, ಯಾರಿಗೂ ಕೇಡು ಬಗೆದವನಲ್ಲ .. ಎಲ್ಲೇ ಇರಲಿ ದೇವರು ಅವನನ್ನ ಚೆನ್ನಾಗಿಟ್ಟಿರಲಿ .